ನಂದಾ, ಗುಲ್ಜಾರಿಲಾಲ್ 
	1898-1998 ಭಾರತದ ಒಬ್ಬ ಹಿರಿಯ ರಾಜಕಾರಣಿ, ಕಾರ್ಮಿಕ ಸಂಘಟಕ, ಸಮಾಜ ಸುಧಾರಕ. ಕೇಂದ್ರ ಸರ್ಕಾರದ ಮಾಜಿ ಮಂತ್ರಿ. ಎರಡು ಸಾರಿ ಇವರು ಹಂಗಾಮಿ ಪ್ರಧಾನಮಂತ್ರಿಯಾಗಿದ್ದರು. 1898ರ ಜುಲೈ 4ರಂದು ಪಂಜಾಬಿನ ಸಿಯಾಲ್‍ಕೋಟ್‍ನಲ್ಲಿ ಜನಿಸಿದ ಇವರು ಲಾಹೋರಿನ ಫೋರ್ಮನ್ ಕ್ರಿಶ್ಚನ್ ಕಾಲೇಜಿನಲ್ಲಿ ವ್ಯಾಸಂಗಮಾಡಿ ಎಂ.ಎ. ಎಲ್‍ಎಲ್.ಬಿ. ಪದವೀಧರರಾದರು. ಆಗ್ರಾ ಹಾಗೂ ಅಲಹಾಬಾದ್‍ಗಳಲ್ಲೂ ವ್ಯಾಸಂಗ ಮಾಡಿದರು. 1924ರಲ್ಲಿ ಗಾಂಧೀಜಿಯವರ ಅನುಯಾಯಿಯಾಗಿ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿದರು. 1921ರಿಂದ 1946ರವರೆಗೆ ಮುಂಬಯಿಯ ನ್ಯಾಷನಲ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ನಡೆಸಿದರು. ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದ ಇವರನ್ನು ಸರ್ಕಾರ 1932ರಲ್ಲೂ 1942-44ರಲ್ಲೂ ಬಂಧನದಲ್ಲಿಟ್ಟಿತ್ತು. 1945ರ ಡಿಸೆಂಬರ್‍ನಲ್ಲಿ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯನ್ನು ರೂಪಿಸಲು ರಚಿತವಾಗಿದ್ದ ಸಮಿತಿಯಲ್ಲೂ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಆರ್ಥಿಕ ಕಾರ್ಯಕ್ರಮ ಸಮಿತಿಯಲ್ಲೂ ಇವರು ಸದಸ್ಯರಾಗಿದ್ದರು. ಸಮಾಜವಾದಿ ಕ್ರಿಯೆಗಾಗಿ ಕಾಂಗ್ರೆಸ್ ವೇದಿಕೆ ಎಂಬುದರ ಪ್ರವರ್ತಕರು ಇವರು (1962).

	ನಂದಾ ಅವರು ಕಾರ್ಮಿಕ ಸಂಘಟನೆಯಲ್ಲಿ ಮೊದಲಿನಿಂದಲೂ ಆಸಕ್ತಿ ವಹಿಸುತ್ತಿದ್ದರು. 1922 ರಿಂದ 1946ರವರೆಗೆ ಇವರು ಅಹಮದಾಬಾದ್ ಜವಳಿ ಕಾರ್ಮಿಕ ಸಂಘಕ್ಕೂ ಹಿಂದೂಸ್ತಾನ್ ಮಜ್ದೂರ್ ಸೇವಕ್ ಸಂಘಕ್ಕೂ ಕಾರ್ಯದರ್ಶಿಯಾಗಿದ್ದರು. 1947ರ ಮೇ ತಿಂಗಳಲ್ಲಿ ಭಾರತ ರಾಷ್ಟ್ರೀಯ ಟ್ರೇಡ್ ಯೂನಿಯನ್ ಸಮ್ಮೇಳನವನ್ನು ವ್ಯವಸ್ಥೆಗೊಳಿಸಲು ಕಾರಣರಾದ ಪ್ರಮುಖರಲ್ಲಿ ಇವರೊಬ್ಬರು. ಇವರು ಮಂತ್ರಿಯಾಗಿದ್ದಾಗ ಕಾರ್ಮಿಕಕ್ಷೇಮದ ಅನೇಕ ವಿಧೇಯಕಗಳು ಮಂಡಿತವಾದುವು. ಇವರು 1937-39ರಲ್ಲಿ ಮುಂಬಯಿ ಪ್ರಾಂತ್ಯದ ಸಂಸದೀಯ ಕಾರ್ಯದರ್ಶಿಯಾಗಿದ್ದರು; 1948-50ರಲ್ಲಿ ಮುಂಬಯಿಯ ಕಾರ್ಮಿಕ ಹಾಗೂ ವಸತಿ ಮಂತ್ರಿಯಾಗಿದ್ದರು; 1950-51ರಲ್ಲಿ ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದರು. ಇವರು ಮರುವರ್ಷ ಯೋಜನಾ ಮಂತ್ರಿಯಾದರು. 1952ರಿಂದ 1957ರವರೆಗೆ ಯೋಜನೆ, ನೀರಾವರಿ ಮತ್ತು ವಿದ್ಯುತ್ ಮಂತ್ರಿಯಾಗಿದ್ದರು. ಇವರು ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ ಇತರ ಖಾತೆಗಳು ಇವು: ಕಾರ್ಮಿಕ, ಉದ್ಯೋಗ ಮತ್ತು ಯೋಜನೆ (1957-63), ಗೃಹ (1963-66) ಮತ್ತು ರೈಲ್ವೆ (1970-71).

	1964ರಲ್ಲಿ ಪ್ರಧಾನಿ ಜವಾಹರಲಾಲ ನೆಹರೂ ನಿಧನ ಹೊಂದಿದಾಗ (ಮೇ27), ಲಾಲ್ ಬಹಾದುರ್ ಶಾಸ್ತ್ರಿ ಅವರು ಪ್ರಧಾನಿ ಆಗುವವರೆಗೂ (ಜೂನ್ 11) 1966ರಲ್ಲಿ ಲಾಲ್ ಬಹಾದೂರ್ ಶಾಸ್ತ್ರಿ ತೀರಿಕೊಂಡಾಗ (ಜನವರಿ 11) ಇಂದಿರಾಗಾಂಧಿಯವರು ಪ್ರಧಾನಿಯಾಗುವ ತನಕವೂ (ಜನವರಿ 24) ಇವರು ಹಂಗಾಮಿ ಪ್ರಧಾನಿಯಾಗಿದ್ದರು. ಆ ಸಮಯದಲ್ಲಿ ಇವರು ಸಂಪುಟದ ಹಿರಿಯ ಸದಸ್ಯರಾಗಿದ್ದರು. ಇವರು ಕಸ್ತೂರಿ ಬಾ ಸ್ಮಾರಕ ಟ್ರಸ್ಟಿನ ಟ್ರಸ್ಟಿಯಾಗಿ ದುಡಿದರಲ್ಲದೆ ಭಾರತ ಸೇವಕ ಸಮಾಜದ ಅಧ್ಯಕ್ಷರಾಗಿದ್ದರು. ಭಾರತ ಸಾಧು ಸಮಾಜದ ಸಲಹಾ ಸಮಿತಿಯ ಸದಸ್ಯರಾಗಿದ್ದರು. 1971ರ ಸೆಪ್ಟೆಂಬರ್ 27ರಿಂದ ಸಿಟಿಜನ್ಸ್ ಸೆಂಟ್ರಲ್ ಕೌನ್ಸಿಲಿನ ಉಪಾಧ್ಯಕ್ಷರಾಗಿದ್ದರು. 1977ರಲ್ಲಿ ಇವರು ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ಇವರಿಗೆ 1997ರಲ್ಲಿ ಭಾರತ ರತ್ನ ಪ್ರಶಸ್ತಿ ಬಂದಿತು.

	ಇವರದು ಸರಳಸ್ವಭಾವ, ನೇರ ವಿಚಾರ ಹಾಗೂ ದಿಟ್ಟ ವ್ಯಕ್ತಿತ್ವ. ಇವರು ಕೇಂದ್ರದಲ್ಲಿ ಗೃಹಸಚಿವರಾಗಿದ್ದಾಗ ಎರಡು ವರ್ಷಗಳೊಳಗೆ ಭ್ರಷ್ಟಾಚಾರವನ್ನು ನಿರ್ಮೂಲ ಮಾಡುವ ಪಣತೊಟ್ಟಿದ್ದರು. ಇದಕ್ಕಾಗಿ ಅನೇಕ ಸದಾಚಾರ ಸಮಿತಿಗಳನ್ನೂ ಜಾಗೃತ ಮಂಡಲಿಗಳನ್ನೂ ರಚಿಸಿ ತೀವ್ರಕ್ರಮಗಳನ್ನು ಕೈಗೊಂಡಿದ್ದರು. ಗುಲ್ಜಾರಿಲಾಲ್ ನಂದಾ 1998ರಲ್ಲಿ ನಿಧನ ಹೊಂದಿದರು.
			     								(ಎಸ್.ಎಸ್.ಎಂ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ